ಪೋಟರ್, ಹೆಲೆನ್ ಬಿಯಾಟ್ರಿಕ್ಸ್
	1866-1943. ಮಕ್ಕಳ ಪುಸ್ತಕಗಳ ಆಂಗ್ಲ ಲೇಖಕಿ. ಹುಟ್ಟಿದ್ದು ಇಂಗ್ಲೆಂಡಿನ ಕೆನ್ಸಿಂಗ್‍ಟನ್‍ನಲ್ಲಿ. ತಂದೆ ಶ್ರೀಮಂತ ವಕೀಲ. ಈಕೆಯ ಶಿಕ್ಷಣ ಮನೆಯಲ್ಲಿಯೇ ನಡೆಯಿತು. ಈಕೆಯ ಉಪಾಧ್ಯಾಯಿನಿ ಶಿಕ್ಷಣದ ಜೊತೆಗೆ ಚಿತ್ರಕಲೆ ಹಾಗೂ ಪ್ರಾಣಿ ಜೀವನದ ಅಧ್ಯಯನದ ಬಗೆಗೆ ಆಸಕ್ತಿ ಮೂಡಿಸಿದಳು. ಮನೆಗೆ ಹತ್ತಿರದಲ್ಲಿಯೇ ಇದ್ದ ವಸ್ತು ಸಂಗ್ರಹಾಲಯ ಈಕೆಯ ಪ್ರಮುಖ ಆಕರ್ಷಣೆಯ ಕೇಂದ್ರವಾಗಿತ್ತು. ಸ್ಕಾಟ್ಲೆಂಡ್ ಮತ್ತು ಲೇಕ್ ಜಿಲ್ಲೆಯಲ್ಲಿ ರಜಾ ದಿನಗಳನ್ನು ಕಳೆಯಲು ದೊರೆತ ಅವಕಾಶಗಳು ಈಕೆಯ ಅಭಿರುಚಿಗಳಿಗೆ ಪೋಷಕವಾಗಿ ಪರಿಣಮಿಸಿದವು. ಪ್ರಾಣಿಗಳ ಬಗೆಗೆ ವಿಶೇಷ ಪ್ರೀತಿಯನ್ನು ಬೆಳೆಸಿಕೊಂಡಿದ್ದ ಈಕೆ ಮೊಲ, ಇಲಿ, ಕಪ್ಪೆ ಮತ್ತು ಮುಳ್ಳು ಹಂದಿ ಮೊದಲಾದುವನ್ನು ಸಾಕಿದ್ದಳು. 

	ರೋಗದಿಂದ ಚೇತರಿಸಿಕೊಳ್ಳುತ್ತಿದ್ದ ಮಗುವೊಂದಕ್ಕೆ ಬರೆದ ಪತ್ರಗಳಲ್ಲಿ ಸಾಕು ಪ್ರಾಣಿಗಳಿಗೆ ಸಂಬಂಧಿಸಿದ ಅನೇಕ ಸ್ವಾರಸ್ಯಕರ ಪ್ರಸಂಗಗಳನ್ನು ಈಕೆ ನಿರೂಪಿಸಿದ್ದಳು. ಅಷ್ಟೇ ಅಲ್ಲ, ಅವುಗಳಿಗೆ ಪೂರಕವಾದ ಸುಂದರ ಚಿತ್ರಗಳನ್ನು ತಾನೇ ರಚಿಸಿದ್ದಳು. ಇವುಗಳ ಸಂಕಲನವೇ ಈಕೆಯ ಮೊದಲ ಪುಸ್ತಕ ದಿ ಟೇಲ್ ಆಫ್ ಪೀಟರ್ ರ್ಯಾಬಿಟ್ (1902). ಶಿಶುಸಾಹಿತ್ಯ ಕರ್ತೃವಾಗಿ ಈಕೆಯ ಹೆಸರನ್ನು ಅಜರಾಮರಗೊಳಿಸಿದ ಪುಸ್ತಕ ಇದು. ಇದನ್ನು ಹಿಂಬಾಲಿಸಿ ಒಂದರ ಮೇಲೊಂದರಂತೆ ದಿ ಟೈಲರ್ ಆಫ್ ಗ್ಲೌಸೆಸ್ಟರ್ (1903). ಸ್ಕ್ಹಿರಲ್ ನಟ್ಕಿನ್ (1903). ಬೆಂಜಮಿನ್ ಬುನ್ನಿ (1904). ಮಿಸೆಸ್ ಟಿಗ್ಲಿವಿಂಕಲ್ (1905) ಮೊದಲಾದ ಪ್ರಾಣಿ ಕಥೆಗಳನ್ನೊಳಗೊಂಡ ಪುಸ್ತಕಗಳು ಹೊರಬಂದವು. ಕೊನೆಯದಂತೂ ಮುಳ್ಳುಹಂದಿಯ ಕಥೆಗೆ ಮೀಸಲಾದ ಪುಸ್ತಕ.

	1906ರಲ್ಲಿ ಹಿಲ್ ಟಾಪ್ ಫಾರ್ಮ್ ಎಂಬ ಕೃಷಿ ಕ್ಷೇತ್ರವನ್ನು ಕೊಂಡುಕೊಂಡು ಅಲ್ಲಿಯೇ ನೆಲಸಿದಳು. 1908ರಲ್ಲಿ ಈಕೆ ಹೊರತಂದ ದಿ ಟೇಲ್ ಆಫ್ ಜಿಮ್ಮಿಯಾ ಪ್ಯೂಡೆಲ್ ಡಕ್ ಎಂಬುದು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ರಚನೆಯಾದರೆ, 1909ರಲ್ಲಿ ಬೆಳಕಿಗೆ ಬಂದ ಜಿಂಜರ್ ಅಂಡ್ ಪಿಕಲ್ಸ್ ಹಳ್ಳಿಯ ಒಂದು ಅಂಗಡಿಯ ವೃತ್ತಾಂತ ನಿರೂಪಿಸುವ ಕೃತಿ. 1913ರಲ್ಲಿ ಪ್ರಕಟಿಸಿದ ಪಿಗ್ಲಿಂಗ್ ಬ್ಲಾಂಡ್ ಈಕೆಯ ಇನ್ನೊಂದು ಪ್ರಸಿದ್ಧ ಕೃತಿ. 

	1913ರಲ್ಲಿ ತನ್ನ ನಲವತ್ತೇಳನೆಯ ವಯಸ್ಸಿನಲ್ಲಿ ಈಕೆ ಆಪಲ್‍ಬೈನಲ್ಲಿ ಸಲಹಾ ವಕೀಲನಾಗಿದ್ದ. ವಿಲಿಯಂ ಹೀಲಿಸ್‍ನನ್ನು ಮದುವೆಯಾಗಿ ಮೂವ್ವತ್ತು ವರ್ಷಗಳ ಸುಖಮಯ ದಾಂಪತ್ಯ ಜೀವನವನ್ನು ನಡೆಸಿದಳು. 

	ಸ್ವರಚಿತ ಜಲವರ್ಣಗಳಿಂದ ಅಲಂಕೃತನಾಗಿರುವ ಈಕೆಯ ಕಿರು ಹೊತ್ತಿಗೆಗಳು ಶಬ್ದಗಳ ಹಾಗೂ ಚಿತ್ರಗಳ ಮೂಲಕ ಸಾಕುಪ್ರಾಣಿಗಳ ಬಗೆಗಿನ ನಿಸರ್ಗ ಸಹಜ ಜೀವನದ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಈಕೆ ಹೇಗೆ ಮತ್ತು ಎಷ್ಟು ಸಮರ್ಥವಾಗಿ ಸೆರೆ ಹಿಡಿಯಬಲ್ಲಳು ಎಂಬುದಕ್ಕೆ ಸಾಕ್ಷಿಯಾಗಿವೆ. ಈ ಪ್ರಾಣಿಗಳಿಗೆ ಅನೇಕ ವೇಳೆ ಮಾನವೀಯ ಗುಣಲಕ್ಷಣಗಳನ್ನು ಆರೋಪಿಸುತ್ತಾಳಾದರೂ ಅವು ಪ್ರಾಣಿಗಳಾಗಿಯೇ ಉಳಿದು ನಮ್ಮನ್ನು ರಂಜಿಸುತ್ತವೆಂಬುದು ಈಕೆಯ ಬರೆಹ ಸಾಧಿಸಿರುವ ಸವ್ಯಸಾಚಿತ್ವಕ್ಕೆ ನಿದರ್ಶನವಾಗಿದೆ. ತನ್ನ ಈ ಸೀಮಿತ ವಲಯದಲ್ಲಿ ವಿಶಿಷ್ಠ ಕಲ್ಪನೆಯ ಚಿತ್ರಗಳ ಮೂಲಕ ಬದುಕಿನ ಸತ್ಯವನ್ನು ಮನದಟ್ಟು ಮಾಡಿಕೊಟ್ಟಿದ್ದು ಹಾಗೂ ಜೀವನದ ಬಗೆಗಿನ ಓದುಗರ ಪರಿಕಲ್ಪನೆಯನ್ನು ಸಾಕಷ್ಟು ವಿಸ್ತರಿಸಿದ್ದು ಈಕೆಯ ಬರೆಹದ ಅನುಪಮ ಸಾಧನೆ. ಈಕೆಯ ಅನೇಕ ಕೃತಿಗಳು ಫ್ರಂಚ್, ಜರ್ಮನ್, ಸ್ಪ್ಯಾನಿಷ್ ಮೊದಲಾದ ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ.
(ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ